ಏರ್ಲಂಗ: ಈಗ ಇಂಡೊನೇಷ್ಯದ ಭಾಗವಾಗಿರುವ ಜಾವಾ ರಾಜ್ಯದ ದೊರೆಗಳಲ್ಲೊಬ್ಬ. ಪುರ್ವ ಜಾವಾ ರಾಜನಾಗಿದ್ದ ಧರ್ಮವಂಶನ ಅಳಿಯ. ಧರ್ಮವಂಶನ ಆಳ್ವಿಕೆಯ ಕಾಲದಲ್ಲಿ ಆ ರಾಜ್ಯ ತಕ್ಕಮಟ್ಟಿನ ಪ್ರಗತಿ ಹೊಂದಿತ್ತು. ಮಲಕ್ಕಾ ಸುಮಾತ್ರಗಳೊಂದಿಗೆ ವ್ಯಾಪಾರ ಬೆಳೆಸಿತ್ತು. ಆದರೆ ಕೆಲವು ಜಲಸಂಧಿಗಳ ಹತೋಟಿ ಯಾರದಾಗಿರಬೇಕೆಂಬ ಪ್ರಶ್ನೆಯ ಬಗ್ಗೆ ಸುಮಾತ್ರದ ಶ್ರೀವಿಜಯ ಸಾಮ್ರಾಜ್ಯಕ್ಕೂ ಧರ್ಮವಂಶನಿಗೂ ವ್ಯಾಜ್ಯ ಹುಟ್ಟಿದ ಫಲವಾಗಿ ಸುಮಾತ್ರನರು ಜಾವ ದ್ವೀಪವನ್ನು ಆಕ್ರಮಿಸಿ ರಾಜಮನೆತನದವರನ್ನು ಕೊಂದು ರಾಜಧಾನಿಯನ್ನು ಧ್ವಂಸಮಾಡಿದರು (1006). ಧರ್ಮವಂಶನ ರಾಜ್ಯ ಚುಕ್ಕುಚೂರಾಯಿತು. ಆದರೆ ಏರ್ಲಂಗ ಶತ್ರುಗಳ ಕೈಗೆ ಸಿಕ್ಕದೆ ತಲೆತಪ್ಪಿಸಿಕೊಂಡು ಅಲೆದಾಡಿ, ಶಕ್ತಿವರ್ಧಿಸಿಕೊಂಡು, ಬೆಂಬಲಿಗರ ನೆರವಿನಿಂದ ರಾಜ್ಯವನ್ನು ಗೆದ್ದ (1010). 1019ರಲ್ಲಿ ಪಟ್ಟಾಭಿಷಿಕ್ತನಾಗಿ ಹಲು ಶ್ರೀಧರ್ಮವಂಶ ಏರ್ಲಂಗ ಅನಂತ ವಿಕ್ರಮೋತ್ತುಂಗ ದೇವ ಎಂಬ ಹೆಸರಿನಿಂದ ಮಹಾರಾಜನಾದ. ಈತನ ಆಳ್ವಿಕೆಯ ಕಾಲದಲ್ಲಿ ರಾಜ್ಯ ಮತ್ತೆ ಒಂದಾಗಿ ಪ್ರಬಲವಾಯಿತು. ಏರ್ಲಂಗ ರಾಜನಾದ ಕೂಡಲೇ ಭೀಷ್ಮ ಪ್ರಭಾವ, ಅಧಮಾಪನು ಮುಂತಾದ ಸಣ್ಣ ರಾಜರುಗಳನ್ನು ಗೆದ್ದ. ದಕ್ಷಿಣ ಜಾವದಲ್ಲಿ ಆಳುತ್ತಿದ್ದ ರಾಣಿಯೊಬ್ಬಳ ಮೇಲೆ 1032ರಲ್ಲಿ ಯುದ್ಧಮಾಡಿ ಅವಳನ್ನು ಸೋಲಿಸಿದ. ಏರ್ಲಂಗನ ಸ್ಥಾನ ಭದ್ರವಾಯಿತು. ಪ್ರ.ಶ. 1035ರಲ್ಲಿ ವೆಂಗ್ಕರ್ ರಾಜ್ಯದ ವಿಜಯನ ಮೇಲೆ ದಂಡೆತ್ತಿಹೋಗಿ ಅವನನ್ನೂ ಸೋಲಿಸಿದ. ತನ್ನ ಶಕ್ತಿ ಪ್ರತಿಷ್ಠೆಗಳಿಗೆ ತಕ್ಕಂತೆ ಕಹುರಿಪನ್ ಎಂಬಲ್ಲಿ ಹೊಸ ರಾಜಧಾನಿ ಸ್ಥಾಪಿಸಿದ. ರಾಜ್ಯದಲ್ಲಿ ಸುಭಿಕ್ಷೆ ಹೆಚ್ಚಿತು. ಕಳಿಂಗ, ಕರ್ನಾಟಕ ಮುಂತಾದ ದೂರ ದೇಶಗಳಿಂದ ವ್ಯಾಪಾರಗಾರರು ಇಲ್ಲಿಗೆ ಬರುತ್ತಿದ್ದರು. ಏರ್ಲಂಗನೂ ಈತನ ಮಾವನಂತೆ ಅನೇಕ ಹಿಂದೂ ದೇವಸ್ಥಾನಗಳನ್ನೂ ಬೌದ್ಧ ಆಶ್ರಮಗಳನ್ನೂ ಸ್ಥಾಪಿಸಿದ. ಸಾಹಿತ್ಯ ಕಲೆಗಳಿಗೆ ಆಶ್ರಯ ನೀಡಿದ. ಕಣ್ವ ಕವಿಯ ಅರ್ಜುನವಿವಾಹ ಎಂಬ ಗ್ರಂಥ ಈತನ ಪ್ರೋತ್ಸಾಹದಿಂದ ರಚಿತವಾಯಿತೆಂದು ಹೇಳಲಾಗಿದೆ. ನ್ಯಾಯಸಂಹಿತೆಯೂ ಹಿಂದೂ ಕಾವ್ಯಗಳೂ ಸಂಸ್ಕೃತದಿಂದ  ಜಾವಾನೀಸ್ ಭಾಷೆಗೆ ಅನುವಾದವಾದವು. ಭಾರತೀಯ ಜ್ಞಾನಭಂಡಾರದ ಬಾಗಿಲನ್ನು ಜಾವದ ಸಾಮಾನ್ಯ ಜನಕ್ಕೂ ತೆರೆಯಲು ಸಾಧ್ಯವಾದದ್ದು ಆಗ.

ಏರ್ಲಂಗ ತನ್ನ ರಾಜ್ಯವನ್ನು ಇಬ್ಬರು ಮಕ್ಕಳಲ್ಲಿ ಹಂಚಿದ. ಈತ ಸತ್ತದ್ದು 1049ರಲ್ಲಿ. ಬೆಲ್ಹನ್ನಲ್ಲಿ ಇವನ ಕಳೇಬರಕ್ಕೆ ಸಮಾಧಿ ಮಾಡಲಾಯಿತು. ಆ ಸ್ಥಳದಲ್ಲಿ ಸ್ಥಾಪಿಸಲಾದ ವಿಷ್ಣುವಿಗ್ರಹ ಏರ್ಲಂಗನ ಕಾಲದ ಶಿಲ್ಪಕಲೆಯ ಪ್ರತೀಕವಾಗಿದೆ. (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ